ಸಂವಿಧಾನ ಕೇವಲ ಪುಸ್ತಕವಲ್ಲ, ಜನರ ಬದುಕಿನ ಆಶಯ: ತೊಲ್ ತಿರುಮಾವಳವನ್

ಆಗಸ್ಟ್ 25, 2026 - 13:07
0 1
ಸಂವಿಧಾನ ಕೇವಲ ಪುಸ್ತಕವಲ್ಲ, ಜನರ ಬದುಕಿನ ಆಶಯ: ತೊಲ್ ತಿರುಮಾವಳವನ್

Vikas News Kannada

ಸಂವಿಧಾನ ಕೇವಲ ಪುಸ್ತಕವಲ್ಲ, ಜನರ ಬದುಕಿನ ಆಶಯ: ತೊಲ್ ತಿರುಮಾವಳವನ್.

ಸಮಾನತೆ, ಸ್ವಾತಂತ್ರ್ಯ, ಸಹಬಾಳ್ವೆ–ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಕಾಪಾಡಬೇಕು; ವಿ.ಪಿ.ಸಿಂಗ್, ಕರ್ಪೂರಿ ಠಾಕೂರ್ ಪ್ರಶಸ್ತಿ ಪ್ರದಾನ

     ಬೆಂಗಳೂರು, ಆ.25: ಸಂವಿಧಾನವೆಂಬುದು ಕೇವಲ ಪುಸ್ತಕವಲ್ಲ; ಅದು ಸಮಾನತೆ, ಸ್ವಾತಂತ್ರ್ಯ, ಸಹಬಾಳ್ವೆ ಹಾಗೂ ಸಾಮಾಜಿಕ ನ್ಯಾಯದ ಜೀವಂತ ಆಶಯವಾಗಿದೆ. ಜಾತ್ಯತೀತತೆ, ಬಹುತ್ವ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಮಿಳುನಾಡಿನ ವಿಸಿಕೆ ಪಕ್ಷದ ಮುಖಂಡ ಹಾಗೂ ಚಿದಂಬರಂ ಲೋಕಸಭಾ ಕ್ಷೇತ್ರದ ಸಂಸದ ತೊಲ್ ತಿರುಮಾವಳವನ್ ಹೇಳಿದರು.

ನಗರದ ಗಾಂಧಿಭವನದಲ್ಲಿ ಕರ್ನಾಟಕ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರು ಮತ್ತು ವರದಿಗಾರರ ಸಂಘ ಹಾಗೂ ವಿ.ನಾಗರಾಜು ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ವಿ.ಪಿ.ಸಿಂಗ್ ಮತ್ತು ಕರ್ಪೂರಿ ಠಾಕೂರ್ ಪ್ರಶಸ್ತಿ ಪ್ರದಾನ ಹಾಗೂ ಡಾ.ಎಂ.ಎಸ್.ಮಣಿ ಅವರ ‘ತೊಡರುಬಳ್ಳಿ’ ಕೃತಿ ಜನಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕೃತಿ ಜನಾರ್ಪಣೆ:

ಕೃತಿ ಜನಾರ್ಪಣೆ ನೆರವೇರಿಸಿ ಮಾತನಾಡಿದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್, ಪ್ರತಿಭೆಗಳಿಗೆ ಗೌರವ ಮತ್ತು ಪುರಸ್ಕಾರ ದೊರೆಯದ ಸಮಾಜ ಆರ್ಥಿಕ ಹಾಗೂ ಸಾಂಸ್ಕೃತಿಕವಾಗಿ ಪ್ರಗತಿ ಹೊಂದಲು ಸಾಧ್ಯವಿಲ್ಲ. ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಸಂಘ ಹಾಗೂ ಪ್ರತಿಷ್ಠಾನ ಮಾಡುತ್ತಿರುವುದು ಶ್ಲಾಘನೀಯ ಎಂದರು.ಪುಸ್ತಕಗಳು ಸಮಾಜ ಪರಿವರ್ತನೆಯ ಶಕ್ತಿಶಾಲಿ ಸಾಧನ:

ಜಗತ್ತಿನಲ್ಲಿ ಹಲವು ಕ್ರಾಂತಿಗಳು ಸಮಾಜದಲ್ಲಿ ಬದಲಾವಣೆ ತಂದಿವೆ. ಆದರೆ ಅನೇಕ ಕ್ರಾಂತಿಗಳಿಂದ ಸಾಧ್ಯವಾಗದಷ್ಟು ಪರಿವರ್ತನೆಯನ್ನು ಪುಸ್ತಕಗಳು ತಂದಿವೆ. ಸಮಾಜದಲ್ಲಿನ ಸಮಸ್ಯೆಗಳನ್ನು ಅಧ್ಯಯನ ಮಾಡಿ, ಅವುಗಳನ್ನು ಪುಸ್ತಕಗಳ ಮೂಲಕ ಜನರ ಮುಂದಿಟ್ಟು ಜಾಗೃತಿ ಮೂಡಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಈ ನಿಟ್ಟಿನಲ್ಲಿ ಡಾ.ಎಂ.ಎಸ್.ಮಣಿ ಅವರ ಕಾರ್ಯ ಮಾದರಿಯಾಗಿದೆ ಎಂದು ನಾಗಮೋಹನ್ ದಾಸ್ ಹೇಳಿದರು.

ಪ್ರಜಾಪ್ರಭುತ್ವದ ಉಳಿವಿನಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ವದ್ದು:

ಅನ್ಯಾಯ, ಅಧರ್ಮ ಮತ್ತು ಸುಳ್ಳು ಯಾವುದೆಂದು ತಿಳಿಯುವ ಸ್ಥಿತಿ ನಿರ್ಮಾಣವಾಗಿದ್ದರೂ ನ್ಯಾಯ, ಧರ್ಮ ಮತ್ತು ಸತ್ಯದ ದಾರಿ ಯಾವುದು ಎಂಬ ಗೊಂದಲ ಸಮಾಜದಲ್ಲಿದೆ. ಇಂತಹ ಸಂದರ್ಭದಲ್ಲಿ ಜನರಲ್ಲಿ ಅರಿವು ಮೂಡಿಸುವ ಜವಾಬ್ದಾರಿ ಪತ್ರಕರ್ತರು ಮತ್ತು ಮಾಧ್ಯಮಗಳ ಮೇಲಿದೆ ಎಂದರು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿ, ಡಾ.ಎಂ.ಎಸ್.ಮಣಿ ಅವರು ಸಾಮಾಜಿಕ ಪ್ರಜ್ಞೆಯುಳ್ಳ ಚಿಂತಕರಾಗಿದ್ದು, ಸಮಾಜಕ್ಕೆ ಸಂದೇಶ ಸಾರುವ ಕೃತಿಗಳನ್ನು ರಚಿಸುತ್ತಿದ್ದಾರೆ. ಅವರಿಂದ ಪ್ರೇರಣೆ ಪಡೆದು ತಾನೂ ಪುಸ್ತಕ ಬರೆಯುವ ಆಸಕ್ತಿ ಹೊಂದಿರುವುದಾಗಿ ತಿಳಿಸಿದರು.

ಗಣ್ಯರಿಗೆ ಪ್ರಶಸ್ತಿ ಪ್ರದಾನ:

ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ದಿನೇಶ್ ಬಿ., ಹೃದ್ರೋಗ ತಜ್ಞ ಡಾ.ನಾಗೇಶ್ ಬಸವರಾಜ, ಹಿರಿಯ ಪತ್ರಕರ್ತ ಡಾ.ರಾಜು ಕಂಬಾರ್ ಹಾಗೂ ಸಮಾಜ ಸೇವಕ ರಾ.ಲಕ್ಷ್ಮೀನಾರಾಯಣ (ಚಿನ್ನಿ) ಅವರಿಗೆ ವಿ.ಪಿ.ಸಿಂಗ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್.ಕಾಂತರಾಜ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ.ಬಿ.ಕೆ.ರವಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಸಿದ್ದರಾಜು, ಹಿರಿಯ ಪತ್ರಕರ್ತರಾದ ಲಕ್ಷ್ಮಣ್ ಕೊಡಸೆ, ಗಂಗಾಧರ್ ಮೊದಲಿಯಾರ್, ಐ.ಎಚ್.ಸಂಗಮದೇವ, ರವಿ ಬಿದನೂರು ಹಾಗೂ ಮಿನಿತೇಜಸ್ವಿ ಅವರಿಗೆ ಕರ್ಪೂರಿ ಠಾಕೂರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರಿಗೆ ಕೃತಜ್ಞತೆ ಸಮರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಲೇಖಕ ಡಾ.ಎಂ.ಎಸ್.ಮಣಿ, ವಿ.ನಾಗರಾಜು ಪ್ರತಿಷ್ಠಾನದ ಅಧ್ಯಕ್ಷೆ ಪದ್ಮಾ ನಾಗರಾಜು, ಆರ್‌ಟಿಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ಕರ್ನಾಟಕ ಮಾಹಿತಿ ಹಕ್ಕು ಆಯೋಗದ ಆಯುಕ್ತ ಬಿ.ವೆಂಕಟಸಿಂಗ್, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆಯ ವಿಶೇಷ ಕಾರ್ಯದರ್ಶಿ ಚಂದ್ರಶೇಖರ ಗಂಗಣ್ಣ ಮುದಗಲ್, ಸಿನಿಮಾ ನಿರ್ಮಾಪಕ ಪ್ರಕಾಶ್ ಪಳನಿ, ಸಂಘದ ಅಧ್ಯಕ್ಷ ಗಂಧರ್ವ ಸೇನಾ, ಪ್ರಧಾನ ಕಾರ್ಯದರ್ಶಿ ವಿರುಪಾಕ್ಷ ಹಾಲಗಳಲೆ, ಕಾರ್ಯದರ್ಶಿ ಶಿವರಾಜ್ ಹಾಗೂ ಹೂಗಾರ ಸಮಾಜದ ರಾಜ್ಯ ಪ್ರದಾನ ಕಾರ್ಯದರ್ಶಿ ವಿಶ್ವನಾಥ ಹೂಗಾರ, ಮಾಧ್ಯಮ ಅಕಾಡೆಮಿ ಸದಸ್ಯ ಕೆ.ನಿಂಗಜ್ಜ ಅಮರೇಶಣ್ಣ ಕಾಮನಕೇರಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

*ಸತ್ಯದೊಂದಿಗೆ ಸದಾ ನಿಮಗಾಗಿ*
*ಇದು ನಿಮ್ಮ ವಿಕಾಸ ನ್ಯೂಸ್ Digital Media* ನಿಮ್ಮ ಪ್ರೋತ್ಸಾಹ ಸದಾ ಇರಲಿ, ಸುದ್ದಿ & ಜಾಹಿರಾತಿಗಾಗಿ ಸಂಪರ್ಕಿಸಿ : *9663272999 – 9449266958.

– ಎಸ್.ಬಿ.ಒಡೆಯರ್ ಮುದಗಲ್

ನಿಮ್ಮ ಪ್ರತಿಕ್ರಿಯೆ ಏನು?

ಇಷ್ಟ ಇಷ್ಟ 0
ಇಷ್ಟವಿಲ್ಲ ಇಷ್ಟವಿಲ್ಲ 0
ಪ್ರೀತಿ ಪ್ರೀತಿ 0
ತಮಾಷೆ ತಮಾಷೆ 0
ವಾಹ್ ವಾಹ್ 0
ದುಃಖ ದುಃಖ 0
ಕೋಪಗೊಂಡ ಕೋಪಗೊಂಡ 0

ಕಾಮೆಂಟ್‌ಗಳು (0)

User