ದಟ್ಟ ಕಾಡಿನಿಂದ ಕ್ಯಾಟ್ವಾಕ್ವರೆಗೆ..! ಇದು ಮಾಜಿ ನಕ್ಸಲ್ ಮಹಿಳೆಯರ ಪರಿವರ್ತನೆಯ ರೋಚಕ ಕಥೆ..!

ಅಂಗುಲಿ ಮಾಲನ ಪ್ರಸಿದ್ಧ ನೀತಿ ಕಥೆಯನ್ನು ನೀವು ಕೇಳಿರಬಹುದು. ಜನರನ್ನು ಕೊಂದು ಅವರ ಕೈಬೆರಳುಗಳನ್ನು ಕತ್ತರಿಸಿ ಮಾಲೆಯಾಗಿ ಹಾಕಿಕೊಂಡು ವಿಕೃತಿ ಮೆರೆಯುತ್ತಿದ್ದ ಅಂಗುಲಿ ಮಾಲ ಬುದ್ಧನ ಸ್ಪರ್ಶದಿಂದ ಶ್ರೇಷ್ಠ ಸಾಧುವಾದ ರೋಚಕ ಕಥೆಯನ್ನು ನೀವು ಅನೇಕ ಬಾರಿ ಕೇಳಿರಬಹುದು..ಎಷ್ಟೇ ಕ್ರೂರ ಮನಸ್ಸಿದ್ದರೂ ಅದು ಪರಿವರ್ತನೆಯಾಗಲು ಒಂದೇ ಒಂದು ಅವಕಾಶ ಬೇಕು ಎನ್ನುವುದಕ್ಕೆ ಈತನ ಕಥೆ ಸಾಕ್ಷಿಯಾಗಿದೆ. ಇದು ನಾವು ಕೇಳಿದ, ಓದಿದ ಕಥೆಯಾದರೆ ಇಂತಹದ್ದೇ ಒಂದು ವಿಶೇಷ ಮನ ಪರಿವರ್ತನೆಯ ಉಹಾಹರಣೆಯೊಂದು ಈಗ ನಮ್ಮ ಮುಂದಿದೆ.

ಒಂದು ಕಾಲದಲ್ಲಿ ದಟ್ಟ ಕಾಡುಗಳಲ್ಲಿ ಶಸ್ತ್ರಾಸ್ತ್ರ ಹಿಡಿದು ನಕ್ಸಲ್ ಚಳುವಳಿಯಲ್ಲಿ ತೊಡಗಿದ್ದ ಮಹಿಳೆಯರು ಇಂದು ಕೈಮಗ್ಗ ಸೀರೆಗಳನ್ನು ಧರಿಸಿ ರ್ಯಾಂಪ್ ಮೇಲೆ ಆತ್ಮವಿಶ್ವಾಸದಿಂದ ಹೆಜ್ಜೆ ಹಾಕುತ್ತಿದ್ದಾರೆ. ಒಂದು ಕಾಲದಲ್ಲಿ ಹಿಂಸೆಯ ಮಾರ್ಗದಲ್ಲಿ ಸಾಗಿದ್ದ ಈ ಮಹಿಳೆಯರು ಇಂದು ಸಮಾಜದ ಮುಖ್ಯವಾಹಿನಿಗೆ ಮರಳಿ, ಉದ್ಯೋಗ, ಆತ್ಮಗೌರವ ಮತ್ತು ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಇಂತಹ ವಿಸ್ಮಯ ನಡೆದಿರುವುದು ನಮ್ಮ ಭಾರತದಲ್ಲಿಯೇ.

ಹೌದು, ಬಸ್ತಾರ್, ಅಬುಜ್ಮರ್ ಹಾಗೂ ಉತ್ತರ ಛತ್ತೀಸ್ಗಢದ ಕಾಡುಗಳು ಹಲವು ವರ್ಷಗಳ ಕಾಲ ನಕ್ಸಲ್ ಚಟುವಟಿಕೆಗಳ ಕೇಂದ್ರವಾಗಿದ್ದವು. ಇದೇ ಪ್ರದೇಶಗಳಲ್ಲಿ ಶಸ್ತ್ರಾಸ್ತ್ರ ಹಿಡಿದು ಓಡಾಡುತ್ತಿದ್ದ ಮಹಿಳೆಯರು ಸರ್ಕಾರ ನೀಡಿದ ಅವಕಾಶ ಬಳಸಿಕೊಂಡು ಈಗ ತಮ್ಮ ಬದುಕು ಬದಲಿಸಿಕೊಂಡು ಕೈಮಗ್ಗ ಸೀರೆಗಳ ಸೌಂದರ್ಯವನ್ನು ಪ್ರದರ್ಶಿಸುತ್ತಾ ಹೊಸ ಜೀವನದ ಸಂದೇಶ ಸಾರಿದ್ದಾರೆ. ರಾಯ್ಪುರದಲ್ಲಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿಶೇಷ ಫ್ಯಾಷನ್ ಶೋನಲ್ಲಿ ಭಾಗವಹಿಸಿದ ಈ ಮಾಜಿ ನಕ್ಸಲ್ ಮಹಿಳೆಯರು ತಮ್ಮ ಬದುಕಿನ ಹೊಸ ಅಧ್ಯಾಯವನ್ನು ದೇಶದ ಮುಂದೆ ಅನಾವರಣಗೊಳಿಸಿದ್ದಾರೆ.
ಕೈಮಗ್ಗ ಸೀರೆಗಳನ್ನು ಧರಿಸಿ ವೃತ್ತಿಪರ ಮಾಡೆಲ್ಗಳಂತೆ ರ್ಯಾಂಪ್ ಮೇಲೆ ನಡೆದ ಈ ಮಹಿಳೆಯರು ತಮ್ಮ ನಗು, ಆತ್ಮವಿಶ್ವಾಸ ಮತ್ತು ಬದಲಾವಣೆಯ ಮೂಲಕ ಸಾವಿರಾರು ಜನರಿಗೆ ಸ್ಫೂರ್ತಿಯಾಗಿದ್ದಾರೆ. ಈ ವಿಶೇಷ ಕಾರ್ಯಕ್ರಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೋಟ್ಯಂತರ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಛತ್ತೀಸ್ಗಢ ಸರ್ಕಾರದ ಪುನರ್ವಸತಿ ಯೋಜನೆಯಡಿ ಶರಣಾದ ನಕ್ಸಲ್ ಮಹಿಳೆಯರಿಗೆ ಶಿಕ್ಷಣ, ಉದ್ಯೋಗ, ಸ್ವಯಂ ಉದ್ಯೋಗ, ಕೌಶಲ್ಯಾಭಿವೃದ್ಧಿ ಹಾಗೂ ಸಮಾಜದ ಮುಖ್ಯವಾಹಿನಿಗೆ ಮರಳಲು ಅಗತ್ಯ ನೆರವು ನೀಡಲಾಗುತ್ತಿದೆ. ಅದರ ಫಲವಾಗಿ ಅನೇಕ ಮಹಿಳೆಯರು ಹೊಸ ಬದುಕು ಆರಂಭಿಸಿದ್ದು, ರಾಷ್ಟ್ರೀಯ ವೇದಿಕೆಯಲ್ಲಿ ಆತ್ಮವಿಶ್ವಾಸದಿಂದ ಕಾಣಿಸಿಕೊಳ್ಳುತ್ತಿದ್ದಾರೆ. ಈ ಫ್ಯಾಷನ್ ಶೋ ಕೂಡ ಸರ್ಕಾರದ ಪುನರ್ವಸತಿ ಕಾರ್ಯಕ್ರಮದ ಭಾಗವಾಗಿದೆ.

ಮೂಲಗಳ ಪ್ರಕಾರ, ರ್ಯಾಂಪ್ನಲ್ಲಿ ಹೆಜ್ಜೆ ಹಾಕಿದವರಲ್ಲಿ ಮಾಜಿ ನಕ್ಸಲ್ ಮಹಿಳೆಯರಲ್ಲಿ ಪುಣೆಂ ದೇವೆ, ಮಧ್ಯಮ ಗಂಗಿ, ಮದ್ವಿ ದೇವೆ, ಮದ್ವಿ ನಾಡನ್ನಿ, ಮದ್ವಿ ಮಾಲೆ, ಪೊಡಿಯಂ ರಾಜೆ, ದೊಡ್ಡಿ ರಮೆ, ಮಡ್ಕಂ ಭೀಮೆ ಹಾಗೂ ಪುಣೆಂ ಜೋಯಿಟ್ಟಿ ಸೇರಿದ್ದಾರೆ ಎನ್ನಲಾಗಿದ್ದು, ಕಾರ್ಯಕ್ರಮದ ಶೋಸ್ಟಾಪರ್ ಆಗಿ ಛತ್ತೀಸ್ಗಢದ ಫೆಮಿನಾ ಮಿಸ್ ಇಂಡಿಯಾ ಈಸ್ಟ್ ಫೈನಲಿಸ್ಟ್ ಅನುಷ್ಕಾ ಸೋನ್ ಭಾಗವಹಿಸಿದ್ದರು.

ಒಂದು ಕಾಲದಲ್ಲಿ ಬಂದೂಕು ಹಿಡಿದಿದ್ದ ಕೈಗಳು ಇಂದು ಕೈಮಗ್ಗವನ್ನು ಪ್ರೋತ್ಸಾಹಿಸುತ್ತಿವೆ. ಹಿಂಸೆಯ ಹಾದಿಯಿಂದ ಸಮಾಜಮುಖಿ ಬದುಕಿನತ್ತ ಸಾಗಿರುವ ಈ ಮಹಿಳೆಯರ ಕಥೆ ಕೇವಲ ಒಂದು ಫ್ಯಾಷನ್ ಶೋ ಅಲ್ಲ. ಈ ಮಹಿಳೆಯರ ಹೊಸ ಬದುಕಿನ ಆಶಾಕಿರಣ. ರಾಯ್ಪುರದ ರ್ಯಾಂಪ್ ಮೇಲೆ ಮೂಡಿದ ಈ ದೃಶ್ಯ, ಬದಲಾವಣೆಗೆ ಅವಕಾಶ ಸಿಕ್ಕರೆ ಯಾರ ಬದುಕು ಕೂಡ ಸನ್ಮಾರ್ಗದಲ್ಲಿ ಸಾಗಬಹುದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

The post ದಟ್ಟ ಕಾಡಿನಿಂದ ಕ್ಯಾಟ್ವಾಕ್ವರೆಗೆ..! ಇದು ಮಾಜಿ ನಕ್ಸಲ್ ಮಹಿಳೆಯರ ಪರಿವರ್ತನೆಯ ರೋಚಕ ಕಥೆ..! appeared first on Pratidhvani.
ನಿಮ್ಮ ಪ್ರತಿಕ್ರಿಯೆ ಏನು?
ಇಷ್ಟ
0
ಇಷ್ಟವಿಲ್ಲ
0
ಪ್ರೀತಿ
0
ತಮಾಷೆ
0
ವಾಹ್
0
ದುಃಖ
0
ಕೋಪಗೊಂಡ
0
ಕಾಮೆಂಟ್ಗಳು (0)