ಸಕ್ಕರೆ ಬೆನ್ನಲ್ಲೇ ಬೆಲ್ಲದ ಬೆಲೆಯೂ ಏರಿಕೆ..! ಕಾರಣವೇನು..?

ಬೆಂಗಳೂರು: ಸಕ್ಕರೆ ಬೆಲೆ ಏರಿಕೆಯ ಬೆನ್ನಲ್ಲೇ ಇದೀಗ ಬೆಲ್ಲದ ಬೆಲೆಯೂ ಗ್ರಾಹಕರಿಗೆ ಬಿಸಿ ಮುಟ್ಟಿಸುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಸಕ್ಕರೆ ಕೆಜಿಗೆ 75 ರೂಪಾಯಿಗೆ ತಲುಪಿದ್ದು, ಬೆಲ್ಲದ ಬೆಲೆಯೂ ಕೆಜಿಗೆ 80 ರೂಪಾಯಿ ಸಮೀಪಕ್ಕೆ ಬಂದಿದೆ.

ಮಹಾಲಿಂಗಪುರ ಎಪಿಎಂಸಿಯಲ್ಲಿ ಕಳೆದ ಕೆಲವೇ ದಿನಗಳಲ್ಲಿ ಬೆಲ್ಲದ ಬೆಲೆ ತೀವ್ರವಾಗಿ ಏರಿಕೆಯಾಗಿದೆ. ನಾಲ್ಕು ದಿನಗಳ ಹಿಂದೆ ಕ್ವಿಂಟಲ್‌ಗೆ 4,500 ರೂ ಇದ್ದ ಬೆಲೆ ಇದೀಗ 7,200 ರೂಪಾಯಿಗೆ ತಲುಪಿದೆ. ಅಂದರೆ ಕ್ವಿಂಟಲ್‌ಗೆ 2,700 ರೂಪಾಯಿ ಏರಿಕೆಯಾಗಿದೆ ಎಂದು ವರದಿಯಾಗಿದೆ.

ಕಬ್ಬಿನ ಲಭ್ಯತೆ ಕಡಿಮೆಯಾಗಿರುವುದು ಬೆಲ್ಲದ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಮಹಾಲಿಂಗಪುರದ ಬೆಲ್ಲಕ್ಕೆ ಉತ್ತರ ಕರ್ನಾಟಕ ಮಾತ್ರವಲ್ಲದೆ, ಹೊರರಾಜ್ಯಗಳಲ್ಲೂ ಹೆಚ್ಚಿನ ಬೇಡಿಕೆ ಇದೆ. ಹಿಂದೆ ಮಹಾಲಿಂಗಪುರದಿಂದ ಪ್ರತಿದಿನ 15ರಿಂದ 20 ಲೋಡ್‌ಗಳಷ್ಟು ಬೆಲ್ಲವನ್ನು ಇತರ ರಾಜ್ಯಗಳಿಗೆ ಕಳುಹಿಸಲಾಗುತ್ತಿತ್ತು. ಆದರೆ ಇದೀಗ ರಫ್ತು ಪ್ರಮಾಣ ಒಂದೆರಡು ಲೋಡ್‌ಗೆ ಇಳಿಕೆಯಾಗಿದೆ. ಪೂರೈಕೆ ಕಡಿಮೆಯಾಗಿರುವ ಸಂದರ್ಭದಲ್ಲಿ ಬೇಡಿಕೆ ಹೆಚ್ಚಿರುವುದರಿಂದ ಬೆಲೆ ಮತ್ತಷ್ಟು ಏರಿಕೆಯಾಗಿದೆ ಎನ್ನಲಾಗಿದೆ.

ಎಥೆನಾಲ್ ಉತ್ಪಾದನೆಯೂ ಕಾರಣ?
ಕಬ್ಬನ್ನು ಸಕ್ಕರೆ ಮತ್ತು ಬೆಲ್ಲದ ಉತ್ಪಾದನೆಗಿಂತ ಎಥೆನಾಲ್ ಉತ್ಪಾದನೆಗೆ ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿರುವುದು ಕೂಡ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿದೆ ಎನ್ನಲಾಗುತ್ತಿದೆ. ಕಬ್ಬಿನ ಲಭ್ಯತೆ ಕಡಿಮೆಯಾದರೆ ಸಕ್ಕರೆ ಮತ್ತು ಬೆಲ್ಲದ ಉತ್ಪಾದನೆಯ ಮೇಲೂ ಒತ್ತಡ ಬೀಳುವ ಸಾಧ್ಯತೆ ಇದೆ. ಹಬ್ಬಗಳ ಸೀಸನ್ ಆರಂಭವಾದ ಹಿನ್ನೆಲೆಯಲ್ಲಿ ಬೆಲ್ಲಕ್ಕೆ ಬೇಡಿಕೆ ಮತ್ತಷ್ಟು ಹೆಚ್ಚಾಗಲಿದ್ದು, ಮುಂದಿನ ದಿನಗಳಲ್ಲಿ ಬೆಲ್ಲದ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

The post ಸಕ್ಕರೆ ಬೆನ್ನಲ್ಲೇ ಬೆಲ್ಲದ ಬೆಲೆಯೂ ಏರಿಕೆ..! ಕಾರಣವೇನು..? appeared first on Pratidhvani.
ನಿಮ್ಮ ಪ್ರತಿಕ್ರಿಯೆ ಏನು?
ಇಷ್ಟ
0
ಇಷ್ಟವಿಲ್ಲ
0
ಪ್ರೀತಿ
0
ತಮಾಷೆ
0
ವಾಹ್
0
ದುಃಖ
0
ಕೋಪಗೊಂಡ
0
ಕಾಮೆಂಟ್‌ಗಳು (0)